ಕ್ರಿಯಾರಹಿತತ್ವ 
	  ಕಬ್ಬಿಣ, ಕೋಬಾಲ್ಟ್, ನಿಕ್ಕಲ್, ಕ್ರೋಮಿಯಂ ಮತ್ತು ಬಿಸ್ಮತ್ ಲೋಹಗಳು ಸಾರ ನೈಟ್ರಿಕ್‍ಆಮ್ಲ, ಕ್ರೋಮಿಕ್‍ಆಮ್ಲ, ಅಯೊಡಿಕ್ ಆಮ್ಲ, ಆರ್ಸೆನಿಕ್ ಆಮ್ಲ, ಹೈಡ್ರೊಜನ್ ಪೆರಾಕ್ಸೈಡ್, ಸೀಸದ ನೈಟ್ರೇಟ್, ಪೊಟ್ಯಾಸಿಯಂ ಪಮ್ರ್ಯಾಂಗನೇಟ್, ಪೊಟ್ಯಾಸಿಯಂ ಡೈಕ್ರೊಮೆಟ್ ಇತ್ಯಾದಿ ಉತ್ಕರ್ಷಣಕಾರಿಗಳ ಸಂಪರ್ಕದಲ್ಲಿ ತಮ್ಮ ಸ್ವಾಭಾವಿಕ ಕ್ರಿಯಾಶಕ್ತಿಯನ್ನು ಕಳೆದುಕೊಂಡು ತಟಸ್ಥ ಸ್ಥಿತಿಯಲ್ಲಿ ಇರುವಿಕೆ (ಪ್ಯಾಸಿವಿಟಿ). ಸಾರ ನೈಟ್ರಿಕಾಮ್ಲದಲ್ಲಿ ಅದ್ದಿದ ಕಬ್ಬಿಣವನ್ನು ಅನಂತರ ಸಾರರಿಕ್ತ ಆಮ್ಲಗಳಲ್ಲಿಟ್ಟರೂ ಕ್ರಿಯೆ ನಡೆಯುವುದಿಲ್ಲ. ಎಂದಿನಂತೆ ಲೋಹ ಲೀನವಾಗಿ ಹೈಡ್ರೊಜನ್ ಬಿಡುಗಡೆಯಾಗುವುದಿಲ್ಲ. ಅಂಥ ಕಬ್ಬಿಣ ತಾಮ್ರದ ಸಲ್ಫೇಟಿನ ದ್ರಾವಣದಲ್ಲಿ ಲೀನವಾಗಿ ತಾಮ್ರವನ್ನು ಒತ್ತರಿಸಲಾರದು. ಹೀಗೆ ಕ್ರಿಯೆ ಸ್ಥಗಿತಗೊಂಡು ಲೋಹ ಜಡವಾಗುವ ಇತರ ಸಂದರ್ಭಗಳು ಬೆಳಕಿಗೆ ಬಂದು ಕ್ರಿಯಾರಹಿತತ್ವ ಎಂಬ ಪದಕ್ಕೆ ಸರಳ ವಿವರಣೆ ಸಾಧ್ಯವಿಲ್ಲದಂತಾಗಿದೆ. ರೂಢಿಯಲ್ಲಿರುವ ಎರಡು ವಿವರಣೆಗಳು ಇಂತಿವೆ:

ವಿದ್ಯುದ್ರಾಸಾಯನಿಕ ಶ್ರೇಣಿಯಲ್ಲಿ (ಎಲೆಕ್ಟ್ರೊಕೆಮಿಕಲ್ ಸೀರೀಸ್) ಪಟುವಾದ ಲೋಹವೆಂದು ಪರಿಗಣಿಸಲ್ಪಟ್ಟಿರುವ ಧಾತುವೊಂದು ಅದಕ್ಕಿಂತ ಕೆಳದರ್ಜೆಯ ಲೋಹದಂತೆ ವರ್ತಿಸುವ ಸಂದರ್ಭ.
ಒಂದು ಲೋಹ ಅಥವಾ ಮಿಶ್ರಲೋಹ ಕ್ಷಯಿಸಿದಾಗ (ಕರ್ರೋಡ್) ಉಷ್ಣಗತಿ ಸಿದ್ಧಾಂತ ರೀತ್ಯಾ ಅದರ ಮುಕ್ತ ಶಕ್ತಿ (ಫ್ರೀ ಎನರ್ಜಿ) ಬಲು ಕಡಿತವಾಗುವ ವಾತಾವರಣವಿದ್ದರೂ ಅದು ಸವೆಯದಿರುವ ಸ್ಥಿತಿ.
ಸಾರ ನೈಟ್ರಿಕಾಮ್ಲದ ಸಂಪರ್ಕದಲ್ಲಿ ಕಬ್ಬಿಣ ಕ್ರಿಯಾರಹಿತವಾಗುವುದು ಒಂದು ರಾಸಾಯನಿಕ ಕ್ರಿಯೆಯ ಪರಿಣಾಮ. ಆದರೆ ವಿದ್ಯುದ್ರಾಸಾಯನಿಕ ಕಾರಣಗಳಿಗಾಗಿ ಕ್ರಿಯಾಹೀನವಾದ ಲೋಹಗಳ ನಿದರ್ಶನಗಳಿವೆ. ತಾಮ್ರದ ಲೇಪನ ಮಾಡುವಾಗ ತಾಮ್ರದ ಸಯನೈಡ್ ದ್ರಾವಣದಲ್ಲಿ ತಾಮ್ರದ ಧನಧ್ರುವಗಳಿರುತ್ತವೆ. ನಿರ್ದಿಷ್ಟ ವಿದ್ಯುದ್ವಿಭವ ಮುಟ್ಟುವವರೆಗೆ ಧನಧ್ರುವ ಲೀನವಾಗುತ್ತ ಹೋಗುತ್ತದೆ. ವಿದ್ಯುದ್ವಿಭವ ಮತ್ತೂ ಹೆಚ್ಚಿದರೆ ತಾಮ್ರದ ಧ್ರುವ ಲೀನವಾಗುವುದು ನಿಂತುಹೋಗಿ ಕ್ರಿಯೆ ಸ್ಥಗಿತಗೊಳ್ಳುತ್ತದೆ. ಆಗ ಅದನ್ನು ತೆಗೆದು ಅದರ ಹೊರಮೈಯನ್ನು ಉಜ್ಜಿದರೆ ಕ್ರಿಯಾರಹಿತ ಸ್ಥಿತಿ ಮಾಯವಾಗುವುದು. ಆದ್ದರಿಂದ ಈ ಜಡತೆಗೆ ಲೋಹದ ಮೇಲೆ ತಾತ್ಕಾಲಿಕವಾಗಿ ಏರ್ಪಟ್ಟಿರುವ ಪೊರೆಯೊಂದು ಕಾರಣವಾಗಿರಬೇಕೆಂದು ತೋರುವುದು ಸಹಜ. ಈ ವಾದವನ್ನು ಮೊದಲು 1836ರಲ್ಲಿ ಮಂಡಿಸಿದವನು ಷಾನ್‍ಬಿನ್. ಸಾಮಾನ್ಯ ಕಬ್ಬಿಣಕ್ಕೆ ದ್ಯುತಿ ವಿದ್ಯುತ್ (ಫೋಟೋ ಎಲೆಕ್ಟ್ರಿಕ್) ಗುಣವಿದೆ. ಆದರೆ ಕ್ರಿಯಾರಹಿತ ಸ್ಥಿತಿಯಲ್ಲಿರುವ ಕಬ್ಬಿಣಕ್ಕೆ ಈ ಗುಣ ಕಡಿಮೆ ಎಂದು 1914ರಲ್ಲಿ ಆಲೆನ್ ತೋರಿಸಿದ್ದಾನೆ. ಹೀಗಾಗಲು ಕಬ್ಬಿಣದ ಮೇಲ್ಮೈಲಕ್ಷಣ ವ್ಯತ್ಯಾಸವಾಗಿರಬೇಕು. ಆದ್ದರಿಂದ ಮೇಲ್ಕಂಡ ವಾದವನ್ನು ಈ ಫಲಿತಾಂಶ ಸಮರ್ಥಿಸುತ್ತದೆ. ಲೋಹದ ನಿಷ್ಕ್ರಿಯ ಸ್ಥಿತಿಗೆ-ಅದು ರಸಾಯನಿಕವಾಗಿರಲಿ ಇಲ್ಲವೇ ವಿದ್ಯುದ್ರಾಸಾಯನಿಕವಾಗಿರಲಿ-ಅದರ ಆಕ್ಸೈಡಿನ ಅಥವಾ ಆಕ್ಸೈಡುಗಳ ರಕ್ಷಾಕವಚವೇ ಕಾರಣವೆಂದು ಈಗ ಎಲ್ಲ ತಜ್ಞರ ಮತ.

	ಕ್ರಿಯಾರಹಿತ ಸ್ಥಿತಿ ಲೋಹದ ಗುಣವನ್ನು ಮಾತ್ರ ಅವಲಂಬಿಸಿಲ್ಲ. ವಾತಾವರಣದ ಪ್ರಭಾವವೂ ಗುರುತರವಾದುದು. ಅದಕ್ಕೆ ಉತ್ಕರ್ಷಣವಾತಾವರಣ ಪ್ರೇರಕವಾಗಿಯೂ ಅಪಕರ್ಷಣ ಸನ್ನಿವೇಶ ಮಾರಕವಾಗಿಯೂ ಪರಿಣಮಿಸುವುದು ಕಂಡು ಬಂದಿದೆ. ವಿದ್ಯುತ್ ಸಂಪರ್ಕ ಪಡೆದಿರುವ ಲೋಹದ ಜೋಡಿಯಲ್ಲಿ ಕಡಿಮೆ ಜಡತ್ವವುಳ್ಳ (ಲೆಸ್ ನೋಬಲ್) ಲೋಹ ಕ್ರಿಯಾರಹಿತವಾಗುವುದು. ಇದು ಎಲ್ಲ ಲೋಹದ ಜೋಡಿಗಳಿಗೂ ಅನ್ವಯಿಸುವ ಸಾರ್ವತ್ರಿಕ ನಿಯಮವಲ್ಲ. ಉದಾಹರಣೆಗೆ ಕಬ್ಬಿಣಕ್ಕಿಂತ ಪ್ಲ್ಯಾಟಿನಂ ಸಂಗದಲ್ಲಿರುವ ಕಬ್ಬಿಣ ಬೇಗ ನಿಷ್ಕ್ರಿಯಗೊಳ್ಳುವುದು. ಆದರೆ ಸತುವಿನ ಸಂಪರ್ಕದಲ್ಲಿ ಹೀಗಾಗುವುದಿಲ್ಲ. ಕಬ್ಬಿಣ ಎಂದಿನಂತೆ ಕ್ರಿಯಾಶಾಲಿಯಾಗಿರುತ್ತದೆ. ಸತುವಿನ ಹೊರಕವಚದಿಂದ ರಕ್ಷಿತವಾಗಿರುವುದರಿಂದ ತನ್ನ ಸ್ವಭಾವವನ್ನು ಪ್ರದರ್ಶಿಸಲು ಅದಕ್ಕೆ ಆಸ್ಪದವಿಲ್ಲ. ಹ್ಯಾಲೊಜನ್ ಆಯಾನುಗಳ ಸಂಪರ್ಕದಲ್ಲಿ ಕ್ರಿಯಾರಹಿತತ್ವ ನಾಶವಾಗುವುದು ವ್ಯಕ್ತಪಟ್ಟಿದೆ. ಕ್ರಿಯಾ ಮಾಧ್ಯಮ ಕ್ಷಾರೀಯವಾಗಿದ್ದರೆ ಆಂಫೊಟೆರಿಕ ಲೋಹಗಳಾದ ಅಲ್ಯೂಮಿನಿಯಂ ಮತ್ತು ಸತುವೂ ಉತ್ಕರ್ಷಕ ಅಥವಾ ತಟಸ್ಥ ಸನ್ನಿವೇಶದಲ್ಲಿ ಇತರ ಲೋಹಗಳಿಗೂ ಕ್ರಿಯಾರಹಿತ ಸ್ಥಿತಿಯನ್ನು ಕಳೆದುಕೊಳ್ಳುತ್ತವೆ.

	ಕ್ರಿಯಾರಹಿತತ್ವದಿಂದ ಪ್ರಯೋಜನವುಂಟು. ಇದಕ್ಕೆ ಸ್ಟೇನ್‍ಲೆಸ್ ಉಕ್ಕೇ ಸಾಕ್ಷಿ. ಪ್ರಾರಂಭದಲ್ಲಿ ಅದರ ಮೇಲೆ ವಾಯುಮಂಡಲದ ಪರಿಣಾಮ ತೀವ್ರವಾಗಿದ್ದು ಕ್ರಮೇಣ ರಕ್ಷಾಕವಚ ಹುಟ್ಟಿ ಕ್ರಿಯಾರಹಿತ ಸ್ಥಿತಿಯುಂಟಾಗಿ ಸುರಕ್ಷಿತವಾಗಿ ಉಳಿಯುವುದು. ಉತ್ಕರ್ಷಣ ವಾತಾವರಣದಲ್ಲಿ ಅಲ್ಯೂಮಿನಿಯಂ ಮತ್ತು ಅದರ ಮಿಶ್ರ ಲೋಹಗಳ ಮೇಲೆ ಅದರ ಆಕ್ಸೈಡಿನ ದಪ್ಪ ಪದರವನ್ನು ಹುಟ್ಟಿಹಾಕಿ ಲೋಹದ ಉಪಯುಕ್ತತೆಯನ್ನು ಹೆಚ್ಚಿಸುವ ಕ್ರಮ ಪ್ರಚಲಿತವಾಗಿದೆ. ಮೂಲತಃ ಇದೂ ಒಂದು ಕ್ರಿಯಾರಹಿತ ಸ್ಥಿತಿಯೇ. ಕೆಲವು ವೇಳೆ ಕ್ರಿಯಾರಹಿತ ಸ್ಥಿತಿಯನ್ನು ನಾಶಮಾಡಲೇಬೇಕಾದ ಅಗತ್ಯ ಬೀಳುತ್ತದೆ. ಮೊದಲು ಹೇಳಿದ ತಾಮ್ರದ ವಿದ್ಯುತ್ ಲೇಪನದ ಸಮಸ್ಯೆ ಇಂಥ ಒಂದು ಪ್ರಸಂಗ. ದ್ರಾವಣದ ಸಯನೈಡ್ ಮತ್ತು ಹೈಡ್ರೊಜನ್ ಆಯಾನುಗಳ ಪ್ರಬಲತೆಯನ್ನು ಹೆಚ್ಚಿಸುವುದರಿಂದ ತಾಮ್ರದ ಧನಧ್ರುವ ಕ್ರಿಯಾರಹಿತವಾಗುವುದನ್ನು ತಪ್ಪಿಸಲು ಸಾಧ್ಯ. ನಿಕಲ್ ವಿದ್ಯುತ್ ಲೇಪನದಲ್ಲೂ ಶುದ್ಧವಾದ ನಿಕಲ್ ಧನಧ್ರುವ ಹೀಗೆಯೇ ವರ್ತಿಸುತ್ತದೆ. ನಿಕಲ್ ಲೋಹವನ್ನು ಅದರ ಅದುರಿನಿಂದ ಗಳಿಸುವಾಗಲೇ ಅದಕ್ಕೆ ಮಿತಪರಿಮಾಣದಲ್ಲಿ ಇಂಗಾಲ ಅಥವಾ ಆಕ್ಸಿಜನ್ ಸೇರಿಸಿಬಿಟ್ಟರೆ ಈ ತೊಂದರೆ ಇರುವುದಿಲ್ಲವೆಂದು ಪ್ರಯೋಗಗಳಿಂದ ಸ್ಥಿರಪಟ್ಟಿದೆ.     (ಎಚ್.ಜಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ